ತುತ್ತೂರಿ ಮೀನು -		
	 ಸಿಂಗ್ನಾತಿಡೆ ಕುಟುಂಬಕ್ಕೆ ಸೇರಿದ ಮೀನು (ಪೈಪ್ ಫಿಶ್). ಇದರ ವೈಜ್ಞಾನಿಕ ನಾಮ ಸಿನ್‍ಗ್ನಾತಸ್. ಇದು ಸಾಮಾನ್ಯವಾಗಿ ಭಾರತ ಮತ್ತು ಚೀನ ಸಮುದ್ರಗಳಲ್ಲಿ ದೊರೆಯುತ್ತದೆ. ಇದು ಆಕಾರದಲ್ಲಿ ಉಳಿದ ಬಗೆಯ ಮೀನುಗಳಿಗಿಂತ ಬೇರೆ. ದೇಹ ಈಲ್ ಮೀನಿನ ದೇಹದಂತೆ ಸಣ್ಣಗೆ ಉದ್ದವಾಗಿದೆ. ದೇಹದ ಉದ್ದ ಸುಮಾರು 45 ಛಿm. ಬಣ್ಣ ಕಂದು. ಹೊರಮೈ ಮೇಲೆ ಒಂದು ಬಗೆಯ ಉಂಗುರಾಕಾರದ, ಗಟ್ಟಿಯಾದ ಹಾಗೂ ಒರಟಾದ ಶಲ್ಕಗಳುಂಟು. ಬಾಲ ಉದ್ದವಾಗಿದೆ. ಬಾಲದ ಈಜುರೆಕ್ಕೆ ಮಾತ್ರ ಚಿಕ್ಕಗಾತ್ರದ್ದು. ಬೆನ್ನಿನ ಈಜುರೆಕ್ಕೆಗಳು ಕಾಣೆಯಾಗಿವೆ. ಎದೆಯ ಈಜುರೆಕ್ಕೆಯೂ ಕಿರಿದಾಗಿದೆ. ಇದರ ಮೇಲೆ ಚುಕ್ಕೆಗಳುಂಟು. ಮೂತಿಯ ಉದ್ದ ತಲೆಯ ಒಟ್ಟು ಉದ್ದದ ಅರ್ಧದಷ್ಟು. ಕಿವಿರುಗಳು ಸರಿಯಾಗಿ ಬೆಳೆದಿಲ್ಲ ; ಸಣ್ಣ ರಂಧ್ರಗಳಂತೆ ಕಾಣುತ್ತವೆ. ಬಾಯಲ್ಲಿ ಹಲ್ಲುಗಳಿಲ್ಲ. ಬಾಯಿ ಹೀರುಬಟ್ಟಲಿನಂತೆ ಕೆಲಸ ಮಾಡುತ್ತದೆ.

	ತುತ್ತೂರಿ ಮೀನಿನಲ್ಲಿ ಕಾಣಬರುವ ಅತಿಸೋಜಿಗದ ಸಂಗತಿ ಎಂದರೆ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಮಾಡುವ ಹೊಣೆ ಗಂಡು ಮೀನಿಗೆ ಸೇರಿರುವುದು. ಗಂಡು ಮೀನಿನ ಉದರ ಭಾಗದಲ್ಲಿ ಎರಡು ಜೋಲುಮುಚ್ಚಳಗಳುಂಟು. ಸಂತಾನ ವೃದ್ಧಿಯ ಶ್ರಾಯದಲ್ಲಿ ಇವೆರಡು ಮುಚ್ಚಳಗಳು ಕೂಡಿಕೊಂಡು ಒಂದು ಚೀಲವನ್ನು ರಚಿಸುವುವು. ಕೆಲವು ಬಗೆಯ ತುತ್ತೂರಿ ಮೀನುಗಳ ಉದರಭಾಗದಲ್ಲಿ ಮೃದುಚರ್ಮದ ಅಸ್ತರಿ (ಲೈನಿಂಗ್) ಇರುವ ಒಂದು ತೋಡು (ಗ್ರೂಪ್) ಇರುವುದೂ ಉಂಟು. ಗಂಡು, ಹೆಣ್ಣು ಮೀನುಗಳು ಕೂಡುವ ಸಮಯದಲ್ಲಿ ಮೊದಲು ಹಲವಾರು ಸಲ ಪರಸ್ಪರ ಹಾಯುವಂತೆ ಈಜಾಡುವುವು. ಅನಂತರ ಗಂಡು ಮೀನು ಹೆಣ್ಣಿನ ಉದರವನ್ನು ತನ್ನ ಉದ್ದ ಮೂತಿಯಿಂದ ಉಜ್ಜುವುದು. ಆಗ ಹೆಣ್ಣು ತನ್ನ ಕೊಳವೆಯಂಥ ಅಂಡನಾಳವನ್ನು (ಓವಿಡಕ್ಟ್) ಗಂಡಿನ ಉದರ ಚೀಲದೊಳಕ್ಕೆ ಸೇರಿಸಿ ಅಂಡಗಳನ್ನು ಇಡುವುದು. ಅನಂತರ ಗಂಡು ಈ ಅಂಡಗಳ ನಿಷೇಚನೆ ನಡೆಯುತ್ತದೆ. ತನ್ನ ಕರ್ತವ್ಯ ಪೂರೈಸಿದ ಹೆಣ್ಣು ಹೊರಟುಹೋಗುತ್ತದೆ. ಗಂಡು ಮೀನು ನಿಷೇಚಿತ ಮೊಟ್ಟೆಗಳು ಮರಿಯಾಗುವವರೆಗೂ ಅಂದರೆ ಸುಮಾರು 2 ವಾರಗಳ ಕಾಲ ತನ್ನ ಸಂಚಿಯಲ್ಲಿ ಹೊತ್ತುಕೊಂಡು ತಿರುಗುತ್ತದೆ. ತರುವಾಯ ಗಂಡು ಮೀನಿನ ಉದರಸಂಚಿ ತೆರೆದುಕೊಂಡು ಅದರಲ್ಲಿನ ದಾರದಂಥ ಮರಿಮೀನುಗಳು ಹೊರಬೀಳುವುವು. ಇವು ಬೆಳೆದು ದೊಡ್ಡವಾಗುವವರೆಗೂ ಗಂಡುಮೀನಿನ ಬಳಿಯಲ್ಲಿಯೇ ಈಜಿಕೊಂಡು ಇರುತ್ತವಲ್ಲದೆ ಅಪಾಯ ಒದಗಿದಾಗ ಅದರ ಸಂಚಿಗೆ ನುಗ್ಗಿ ಅಡಗಿಕೊಳ್ಳುವುವು.                                               

(ಎಚ್.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ